ಗ್ರ್ಯಾನ್‍ವಿಲ್ - ಬಾರ್ಕರ್ ಹಾರ್ಲೆ

1877 - 1946. ನಟ, ನಾಟಕಕಾರ, ವಿಮರ್ಶಕ.

	ಲಂಡನಿನಲ್ಲಿ ಹುಟ್ಟಿದ ಈತ, ಹದಿಮೂರನೆಯ ವಯಸ್ಸಿಗೇ ರಂಗಶಿಕ್ಷಣವನ್ನು ಪಡೆದು ಹದಿನೈದರ ವೇಳೆಗೆ ನಟನಾಗಿ ರಂಗಪ್ರವೇಶ ಮಾಡಿದ. ಈತನಿಗೆ ವೃತ್ತಿರಂಗದಲ್ಲಿ ಯಶಸ್ಸು, ಹಣ ಎರಡನ್ನೂ ಗಳಿಸುವ ಅವಕಾಶವಿತ್ತು. ಆದರೆ ಈತನ ಪ್ರಯೋಗಶೀಲ ಮನಸ್ಸು ಬಯಸ್ಸಿದ್ದೇ ಬೇರೆ. ವಿಲಿಯಮ್ ಪೋಯೆಲನ ಎಲಿಜûಬೀತನ್ ಸ್ಟೇಜ್ ಸೊಸೈಟಿಯಲ್ಲೂ ಬೆನ್ ಗ್ರೀಟ್‍ನ ಷೆಕ್ಸ್‍ಪಿಯರ್ ರೆಪರ್ಟರಿಯಲ್ಲೂ ಕೆಲಸಮಾಡಿದ ಅನಂತರ 1900ರಲ್ಲಿ ಪ್ರಯೋಗಾತ್ಮಕ ಸ್ಟೇಜ್ ಸೊಸೈಟಿಯಲ್ಲೂ 1904ರಲ್ಲಿ ಜೆ. ಇ. ವೆಡ್ರೆನನೊಂದಿಗೆ ಸೇರಿ ಕೋರ್ಟ್‍ಥಿಯೇಟರಿನ ನಿರ್ವಾಹಕನಾಗಿಯೂ ಕೆಲಸ ಮಾಡಿದ. ಅನೇಕ ಹೊಸ ನಾಟಕಗಳನ್ನು ರಂಗದ ಮೇಲೆ ತಂದದ್ದಲ್ಲದೆ ಹಳೆಯವನ್ನೂ ಹೊಸ ದೃಷ್ಟಿಯಿಂದ ಪ್ರದರ್ಶಿಸಿದ. ಒಂದನೆಯ ಮಹಾಯುದ್ಧ ಈತನ ಸಾಧನೆಗಳಿಗೆ ದೊಡ್ಡ ತಡೆಯಾಯಿತು. ಯುದ್ಧ ಕಾಲದಲ್ಲಿ ರೆಡ್‍ಕ್ರಾಸ್ ಸೇರಿ ಸೇವೆ ಸಲ್ಲಿಸಿದ. ಅನಂತರ ಬ್ರಿಟಿಷ್ ಡ್ರಾಮಾಲೀಗಿನ ಅಧ್ಯಕ್ಷನಾದ. ಪ್ಯಾರಿಸಿನಲ್ಲಿ ನೆಲೆಸಿ ಸ್ಪ್ಯಾನಿಷ್ ನಾಟಕಗಳನ್ನು ಅನುವಾದಿಸಿದಲ್ಲದೆ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಬ್ರಿಟಿಷ್ ಇನ್ಸ್‍ಟಿಟ್ಯೂಟಿನ ನಿರ್ದೇಶಕನಾದ. ಅನಂತರ ಕೊಂಚಕಾಲ ಅಮೆರಿಕದಲ್ಲಿ ಬ್ರಿಟಿಷ್ ವೃತ್ತಾಂತ ಸಂಸ್ಥೆಯ ಪರವಾಗಿ ಕೆಲಸಮಾಡಿದ. 1946ರಲ್ಲಿ ಪುನಃ ಪ್ಯಾರಸಿಗೆ ಬಂದು, ಅದೇ ವರ್ಷ ಗತಿಸಿದ.

	ಈತನ ಕೃತಿಗಳಲ್ಲಿ ಹೆಸರಾದವು - ವಾಯ್ಸೀ ಇನ್‍ಹೆರಿಟೆನ್ಸ್ ; ಮದ್ರಾಸ್ ಹೌಸ್ ಮತ್ತು ಮ್ಯಾರಿಯಿಂಗ್ ಆಫ್ ಆ್ಯನ್ ಲೀಟ್. ಇವು ಸಾಮಾಜಿಕ ಗದ್ಯನಾಟಕ ಪ್ರಕಾರಕ್ಕೆ ಸೇರಿದವಾಗಿ ಬರ್ನಾರ್ಡ್ ಷಾನ ಕೃತಿಗಳನ್ನು ನೆನೆಪಿಗೆ ತರುವಂಥವು. ಇವಲ್ಲದೆ ಇತರರೊಂದಿಗೆ ಸೇರಿ ಇನ್ನೂ ಹಲವು ಇದೇ ಪ್ರಕಾರದ ಕೃತಿಗಳನ್ನು ರಚಿಸಿದ್ದಾನೆ. ವ್ಯಕ್ತಿ ಮತ್ತು ಸಮಾಜದ ದೋಷಗಳನ್ನು ಯಶಸ್ವಿಯಾಗಿ ತನ್ನ ನಾಟಕಗಳಲ್ಲಿ ತಂದಿರುವನದರೂ ಈತನ ಕೀರ್ತಿ ನಿಂತಿರುವುದು ಈತ ಷೇಕ್ಸ್‍ಪಿಯರನ ಕೆಲವು ನಾಟಕಗಳಿಗೆ ಬರೆದಿರುವ ವಿಮರ್ಶಾತ್ಮಕ ಪ್ರಸ್ತಾವನೆಗಳಿಂದ.

	ಪ್ರಯೋಗಶೀಲ ಹವ್ಯಾಸೀ ರಂಗಭೂಮಿಗೆ ಈತ ಸಲ್ಲಿಸಿದ ಸೇವೆ ಅಪಾರ. ಇಬ್ಸೆನ್, ಮೆಟರ್‍ಲಿಂಕ್, ಷಾ, ಗಾಲ್ಸ್‍ವರ್ದಿ ಮುಂತಾದ ಅನೇಕರ ಕೃತಿಗಳನ್ನೂ ಗ್ರೀಕ್ ನಾಟಕಗಳನ್ನೂ ಪ್ರದಶಿಸಿದ. ಮೊದಲ ಹೆಂಡತಿ ಲಿಲ ಮೆಕಾರ್ತಿಯೊಂದಿಗೆ ಎಷ್ಟೊ ನಾಟಕಗಳಲ್ಲಿ ಅಭಿನಯಿಸಿದ. ಕೋರ್ಟ್‍ಥಿಯೇಟರ್ ಒಂದು ಪ್ರಗತಿಶೀಲ ಲೇಖಕನ ರಂಗಭೂಮಿ ಎನಿಸಿದ್ದು ಈತನಿಂದಾಗಿ. ಇದಕ್ಕೂ ಮಿಗಿಲಾಗಿ ಈತ ಷೇಕ್ಸ್‍ಪಿಯರ್‍ಗೆ ಎಲಿಜಬೀತನ್ ನಾಟಕಗಳಿಗೆ ಸಲ್ಲಿಸಿರುವ ಸೇವೆ ಅಪಾರ. 19ನೆಯ ಶತಮಾನದ ಚಿತ್ರಚೌಟ್ಟಿನ ರಂಗಮಂಚ, ಅದರ ದೃಶ್ಯ ವೈಭವ, ಸಜ್ಜಿಕೆಯ ಅತಿಸಮೃದ್ಧಿಗಳಿಂದಾಗಿ ಷೇಕ್ಸ್‍ಪೀಯರ್ ಉಸಿರುಗಟ್ಟಿ ಬಣ್ಣ ಗೆಟ್ಟು ವಿಕಾರ ಹೊಂದಿದ್ದ. ಆತನನ್ನು ಅದರಿಂದ ಪಾರುಮಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಈತ ಎಲಿಜಬೀತನ್ ರಂಗಮಂಚವನ್ನೇ ಅಳವಡಿಸಿಕೊಂಡದ್ದು ಮಾತ್ರವಲ್ಲ. ನಾಟಕದ ನಡೆಯ ವೇಗವನ್ನೂ ಹೆಚ್ಚಿಸಿದ. ಸಂಪೂರ್ಣ ಷೇಕ್ಸ್‍ಪೀಯರ್ ಕೃತಿಗಳನ್ನು ಮೂಲರೂಪದಲ್ಲಿಯೇ ಪ್ರದರ್ಶಿಸಿದ. ಅಭಿನಯ ಮತ್ತು ಮಾತುಗಾರಿಕೆಯಲ್ಲೂ ತುಂಬ ಯೋಗ್ಯ ಸುಧಾರಣೆಗಳನ್ನು ತಂದ. ನಿರ್ಮಾತೃಗಳು ತಮ್ಮ ಮನಸ್ಸಿಗೆ ಬಂದಂತೆ ಪಠ್ಯಭಾಗವನ್ನು ಪಲ್ಲಟಗೊಳಿಸಿ ವಿಕಾರಗೊಳಿಸುತ್ತಿದ್ದುದ್ದರಲ್ಲಿ ಎಂಥ ಹಾನಿ ಇದೆಯೆಂಬುದನ್ನು ಸ್ಪಷ್ಟಪಡಿಸಿದ. ಷೇಕ್ಸ್‍ಪೀಯರ್ ನಾಟಕಗಳ ಇಂದಿನ ಪ್ರದರ್ಶನ ವಿಧಾನ ಯಾವುದೇ ಇರಲಿ, ಅದು ಬಾರ್ಕರ್‍ಗೆ ಕೊಂಚಮಟ್ಟಿಗಾದರೂ ಋಣಿ ಎನ್ನಬೇಕು.

	ಈತನ ರಂಗಸಾಧನೆಗಳಲ್ಲಿ ಮೊದಲ ಹೆಂಡತಿಯಂತೆ ಎರಡನೆಯ ಹೆಂಡತಿ ಹೆಲೆನ್ ಎಂಬ ಅಮೆರಿಕನ್ ಮಹಿಳೆಯೂ ಸಹಕರಿಸಿದಳು. ಸ್ಟ್ಯಾನಿಷ್ ಅನುವಾದಗಳಲ್ಲಿ ಆಕೆಯ ನೆರವು ಈತನಿಗೆ ಲಭಿಸಿತು. ತಾವು ಕಾರ್ಯವಾಹಿಯಾಗಿ ರಂಗಪ್ರಯೋಗಗಳನ್ನು ನಡೆಸಿದುದರ ಅನುಭವದ ಹಿನ್ನೆಲೆಯಲ್ಲಿ ಈತ ಪೇಕ್ಸ್‍ಷಿಯರ್‍ಗೆ ಪೀಠಿಕೆಗಳು ಎಂಬ ಒಂದು ವಿಮರ್ಶನ ಗ್ರಂಥಗಳನ್ನು ಬರೆದಿದ್ದಾನೆ. ಲೌಸ್ ಲೇಬರ್ ಲಾಸ್ಟ, ರೋಮಿಯೋ ಮತ್ತು ಜೂಲಿಯೆಟ್, ಟ್ವೆಲ್ಫ್ತ ನೈಟ್, ಹ್ಯಾಮ್ಲೆಟ್, ಒಥೆಲೋ, ಕಿಂಗ್ ಲಿಯರ್ ಮುಂತಾಗಿ ಹತ್ತು ನಾಟಕಗಳ ವಿಮರ್ಶಾತ್ಮಕ ಪ್ರಸ್ತಾವನೆಗಳನ್ನುಳ್ಳ ಈ ಗ್ರಂಥ ಈತನ ಇತರ ಎಲ್ಲ ಸಾಧನೆಗಳಿಗಿಂತಲೂ ಹಿರಿದಾದದ್ದು; ಶಾಶ್ವತ ಕೀರ್ತಿಯನ್ನು ತಂದುಕೊಡುವಂಥದ್ದು ಇದನ್ನು ಓದುವುದೇ ನಾಟಕಾಸ್ತನಿಗೆ ಒಂದು ಹೊಸ ಅನುಭವ. ಜೀವಂತ ಷೇಕ್ಸ್‍ಪಿಯರನನ್ನು ಒಡಮೂಡಿಸುವುದು ಈತನ ಉದ್ದೇಶ. ಅದರಲ್ಲಿ ಈತ ಸಂಪೂರ್ಣ ಯಶಸ್ವಿಯಾಗಿದ್ದಾನೆ.		(ಆರ್.ಎನ್.ಎ.ಜಿ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ